ಬಾಲ್ಕ್ -
ಉತ್ತರ ಆಫ್ಘಾನಿಸ್ತಾನದ ಒಂದು ಪ್ರಾಂತ. ಉತ್ತರಕ್ಕೆ ರಷ್ಯ, ಪೂರ್ವಕ್ಕೆ ಸಾಮಾನ್ಗಾನ್, ದಕ್ಷಿಣಕ್ಕೆ ಬಾಮೀಯಾನ್ ಮತ್ತು ಪಶ್ಚಿಮಕ್ಕೆ ಜುಜಾನ್ ಆಫ್ಘನ್ ಪ್ರಾಂತ್ಯಗಳಿವೆ. ವಿಸ್ತೀರ್ಣ 15,626 ಚಕಿಮೀ. ಜನಸಂಖ್ಯೆ 3,53,772 (1970). ಈ ಪ್ರಾಂತದ ಉತ್ತರ ಭಾಗ ಸಮತಟ್ಟಾದ ಬಯಲು ಪ್ರದೇಶ; ದಕ್ಷಿಣಭಾಗ ಬೆಟ್ಟಗುಡ್ಡಗಳಿಂದ ಕೂಡಿದೆ. ಚಳಿ ಬಿಸಿಲು ಎರಡೂ ಅತಿ ಇರುವ ಈ ಪ್ರದೇಶದ ಪ್ರಧಾನ ಬೆಳೆಗಳೆಂದರೆ ದ್ವಿದಳಧಾನ್ಯಗಳು, ಹಣ್ಣುಹಂಪಲು ಹಾಗೂ ಹತ್ತಿ.
ರಾಜಧಾನಿಗೆ ಕೆಲವೇ ಕಿಮೀ ದೂರ ಪಶ್ಚಿಮದಲ್ಲಿರುವ ಬಾಲ್ಕ್ (ವಜೀರಾಬಾದ್) ಐತಿಹಾಸಿಕ ಮಹತ್ತ್ವವುಳ್ಳ ಊರು. ಇದರ ನೆಲೆ ಉತ್ತರ ಅಕ್ಷಾಂಶ 360 44 ಮತ್ತು ಪೂರ್ವ ರೇಖಾಂಶ 660 58 ಸಮುದ್ರಮಟ್ಟದಿಂದ ಸುಮಾರು 366 ಮೀ. ಎತ್ತರದಲ್ಲಿರುವ ಈ ಊರು ಬಾಲ್ಕ್ ನದಿಯ ಉತ್ತರ ದಂಡೆಯ ಮೇಲಿದೆ. ಆಫ್ಘಾನಿಸ್ತಾನವನ್ನು ಹಾದುಹೋಗುವ ಒಂದು ಪ್ರಮುಖ ಕಾರವಾನ್ ಮಾರ್ಗದಲ್ಲಿ ಈ ಊರು ಇದ್ದು ಪ್ರಾಚೀನ ಬ್ಯಾಕ್ಟ್ರಿಯದ ರಾಜಧಾನಿಯಾಗಿತ್ತು. ಈ ಊರಿನಲ್ಲಿ ಜರತುಷ್ಟ್ರ ಮೃತನಾದನೆಂದು ಐತಿಹ್ಯವಿದ್ದು ಇದಕ್ಕೆ ಪೂಜ್ಯ ಸ್ಥಾನ ಲಭಿಸಿದೆ. ಖೊರಾಸಾನಿನ ರಾಜಧಾನಿಯಾಗಿ ಹೆಸರಾಂತ ವಿದ್ಯಾಕೇಂದ್ರವೆನಿಸಿತ್ತು.

ಬಾಲ್ಕ್ ನಿವೇಶನದ ಮೇಲೆ ಒಂದರ ಮೇಲೊಂದರಂತೆ ಅನೇಕ ನಗರಗಳು ಹುಟ್ಟಿ. ಬೆಳೆದು, ರೋಗರುಜಿನಾದಿ ಕಾರಣಗಳಿಂದ ಮತ್ತು ಯುದ್ಧಗಳಿಂದ ನಾಶವಾದವು. ಕ್ರಿ.ಪೂ. 5ನೆಯ ಶತಮಾನದಲ್ಲಿ ಸೈರಸ್‍ನ ಪರ್ಷಿಯನ್ ಸಾಮ್ರಾಜ್ಯದ ಒಂದು ಸತ್ರಪಿಯಾಗಿದ್ದ ಬ್ಯಾಕ್ಟ್ರಿಯವನ್ನು ಕ್ರಿ.ಪೂ.4ನೆಯ ಶತಮಾನದಲ್ಲಿ ಅಲೆಗ್ಸಾಂಡರ್ ಗೆದ್ದ. ಕ್ರಿ.ಶ. 1220ರಲ್ಲಿದ್ದ ಬಾಲ್ಕ್ ನಗರ ಚೆಂಗೇಸ್‍ಖಾನನಿಂದ ನಾಶವಾಯಿತು. ಆದರೆ ಖ್ಯಾತ ಪ್ರವಾಸಿ ಮಾರ್ಕೋಪೊಲೋ ಕ್ರಿ.ಶ. 13ನೆಯ ಶತಮಾನದ ಉತ್ತರಾರ್ಧದಲ್ಲಿ ಭೇಟಿ ನೀಡುವ ಹೊತ್ತಿಗೆ ಮತ್ತೊಂದು ಮಹಾನಗರ ಬೆಳೆದಿತ್ತು. 17ನೆಯ ಶತಮಾನದಲ್ಲಿ ಔರಂಗಜೇಬನ ಆಡಳಿತ ಕೇಂದ್ರವೆನಿಸಿದ ಬಾಲ್ಕ್ 1736ರಲ್ಲಿ ಪರ್ಷಿಯದ ನಾದಿರ್‍ಷಾನ ನಾಶವಾಯಿತು. 1820ರಲ್ಲಿ ತುರ್ಕಿಸ್ತಾನದ ಷಾ ಮುರಾದ್ ಈ ನಗರವನ್ನು ಜಯಿಸಿದ; ಕೆಲಕಾಲ ಬುಖೇರಿಯಾದ ಖಾನನ ಪ್ರಭುತ್ವಕ್ಕೊಳಪಟ್ಟು ಕೊನೆಗೆ ಕ್ರಿ.ಶ. 1850ರಲ್ಲಿ ಆಫ್ಘಾನಿಸ್ತಾನಕ್ಕೆ ಸೇರಿತು.

ಬಾಲ್ಕ್ ಹಾಗೂ ಅದರ ಸುತ್ತಮುತ್ತಲಲ್ಲಿ ಹಲವು ಬೌದ್ಧ ವಿಹಾರ ಸ್ತೂಪಗಳು ಮತ್ತು ಮಹಮದೀಯ ಸ್ಮಾರಕಗಳ ಅವಶೇಷಗಳು ಕಾಣಸಿಗುತ್ತವÉ. ಪ್ರಸಿದ್ಧವಾದ ಬೌದ್ಧಸ್ತೂಪ ತೋಪ್-ಇ-ರುಸ್ತುಮ್ 15.24 ಮೀ ಎತ್ತರವಿದ್ದು ಅದರವ್ಯಾಸ ತಳಭಾಗದಲ್ಲಿ 45.72 ಮೀ ಹಾಗೂ ಮೇಲ್ಭಾಗದಲ್ಲಿ 27.43 ಮೀ. ಇದೆ.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ